ಅಡ್ಡ ನಂದೇ ಅಂತಿದ್ದಾರೆ ಬೆಂಕೋಶ್ರೀ
published on Nov.09, 2011, under News
ಕೆಲ ದಿನಗಳಿಂದ `ಅಡ್ಡ’ ನಂದೇ ಬಾಸ್… ಯಾರೇನೇ ಅಂದರೂ `ಅಡ್ಡ’ಕ್ಕೆ ಅಧಿಪತಿ ನಾನೇ ಬ್ರದರ್… ಎಂದು ಕಂಡಕಂಡವರ ಕಿವಿಗೆ ಹೂವಿಡುತ್ತಿದ್ದ ನಿರ್ದೇಶಕ ಪ್ರೇಮ್ ಬಾಯಿ ಮುಚ್ಚಿಸಿದ್ದಾರೆ ನಿರ್ಮಾಪಕ ಕಮ್ ವಿತರಕ ಬೆಂಕೋಶ್ರೀ. ಬರೋಬ್ಬರಿ 14 ತಿಂಗಳಿನಿಂದ ಶೀರ್ಷಿಕೆಯನ್ನು ನವೀಕರಿಸದೇ ಬೇಜವಾಬ್ದಾರಿಯಿಂದ ಕಾಲ ಕಳೆದಿದ್ದ ಪ್ರೇಮ್ ಇದೀಗ `9 ವರ್ಷದಿಂದ ಇಟ್ಟುಕೊಂಡಿದ್ದ ಟೈಟಲ್ನ ಅದ್ಹೇಗೆ ಬೇರೆಯವರು ಇಟ್ಟುಕೊಳ್ಳೇಕೆ ಸಾಧ್ಯ…? ಏನೇ ಆದ್ರೂ `ಅಡ್ಡ ‘ ನಂದೇ…’ ಎಂದು ಬಡಬಡಿಸುತ್ತಿದ್ದಾರೆ.
ಆದರೆ ಸಾ.ರಾ.ಗೋವಿಂದು ಬಳಿ ಕಾನೂನುಬದ್ಧವಾಗಿ ಶೀರ್ಷಿಕೆ ಪಡೆದು ಹರ್ಷ ಪ್ರೊಡಕ್ಷನ್ಸ್ ಸಂಸ್ಥೆಯಡಿ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ ಬೆಂಕೋಶ್ರೀ. ಈಗಾಗಲೇ ಅವರು ಬ್ಯಾನರ್ನಲ್ಲಿ ತಯಾರಾಗುತ್ತಿರುವ `ಅಲೆಮಾರಿ’ ಜನವರಿಗೆ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಅದು ಮುಗಿಯುತ್ತಿದ್ದಂತೆ ಮತ್ತೊಂದು ಹೊಸ ಚಿತ್ರದ ತಯಾರಿಗೆ ಸಿದ್ಧತೆ ನಡೆಯುತ್ತಿದೆ. ಆ ಚಿತ್ರದ ಕೆಲಸ ಮುಗಿಯುತ್ತಿದ್ದಂತೆ `ಅಡ್ಡ’ ಶುರುವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ ಬೆಂಕೋಶ್ರೀ.
ಸದ್ಯ `ಅಡ್ಡ’ಕ್ಕೆ ಕಥೆ ಸಿದ್ಧಪಡಿಸುತ್ತಿದ್ದಾರೆ `ಅಲೆಮಾರಿ’ ನಿರ್ದೇಶಕ ಸಂತು. `ಅಲೆಮಾರಿ’ ಕೂಡ ಚಿತ್ರೀಕರಣ ಹಂತದಲ್ಲಿರುವುದರಿಂದ `ಅಡ್ಡ’ಕ್ಕೆ ಪೂರ್ಣವಾಗಿ ತೊಡಗಿಸಿಕೊಳ್ಳಲಾಗದೇ ಬಿಡುವಿನ ಸಮಯದಲ್ಲೇ ಕಥೆ ಹೆಣೆಯುತ್ತಿದ್ದಾರೆ ಸಂತು. ಆದಷ್ಟು ವಾಸ್ತವಕ್ಕೆ ಹತ್ತಿರವಾದ ಸಿನಿಮಾ ಮಾಡಬೇಕೆಂಬುದು ಸಂತು ಬಯಕೆ. ಹೀಗಾಗಿ ಈಗಾಗಲೇ ಕಥೆಗೆ ಸಹಾಯವಾಗುವ ಎಲ್ಲಾ ಅಂಶಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರಂತೆ.
“ಅಡ್ಡ’ ಶೀರ್ಷಿಕೆಗೆ ಸಂಬಂಧಪಟ್ಟಂತೆ ಯಾರೂ `ಅಡ್ಡ’ ಬರಬೇಡಿ… ಇನ್ನು ಮುಂದೆ `ಅಡ್ಡ ‘ ನನ್ನ ಸ್ವತ್ತು…’ ಎಂದು ಹೇಳಲು ಪತ್ರಿಕಾಗೋಷ್ಠಿ ಕರೆದಿದ್ದರು ಬೆಂಕೋಶ್ರೀ. ಅಲ್ಲದೇ ಅದಕ್ಕೆ ಪೂರಕವಾದ ದಾಖಲೆಗಳನ್ನೂ ಒದಗಿಸಿದರು. ಈ ವೇಳೆ ಬೆಂಕೋಶ್ರೀ ಮಾತನಾಡಿದಿಷ್ಟು…
`ಓಂ ಎಂಟರ್ಪ್ರೈಸಸ್ನಡಿ ನೋಂದಣಿಯಾಗಿದ್ದ ದಿನಾಂಕ 05.11.2010ರಂದು ಫಿಲಂ ಚೇಂಬರ್ ರದ್ದುಪಡಿಸಿದೆ. ಪ್ರೇಮ್ ಅದೇ ಟೈಟಲ್ ಬೇಕಾಗಿದ್ದಲ್ಲಿ 40 ದಿನಗಳೊಳಗೆ ಅದನ್ನು ರಿನ್ಯೂವಲ್ ಮಾಡಿಸಿಕೊಳ್ಳಬಹುದಿತ್ತು. ಆಗ ತಲೆಕೆಡಿಸಿಕೊಳ್ಳದೇ ಇದ್ದುದ್ದರ ಪರಿಣಾಮ ದಿನಾಂಕ 15.11.2010ರಂದು ಸಾ.ರಾ.ಗೋವಿಂದು ತಮ್ಮ ತನು ಚಿತ್ರ ಬ್ಯಾನರ್ನಲ್ಲಿ ರಿಜಿಸ್ಟರ್ ಮಾಡಿಕೊಂಡರು. ಕಾರಣಾಂತರಗಳಿಂದ ಅವರಿಗೆ ಸಿನಿಮಾ ಮಾಡಲು ಆಗಲಿಲ್ಲ. ಹೀಗಾಗಿ ಅಶ್ವಿನಿ ಮೀಡಿಯಾ ನೆಟ್ವರ್ಕನ ಕೃಷ್ಣಪ್ರಸಾದ್ ಹಾಗೂ ನಾನು, ದಿನಾಂಕ 13.10.2011ರಂದು ಸಾ.ರಾ.ಗೋವಿಂದು ಅವರ ಬಳಿ ಟೈಟಲ್ ಬೇಕೆಂದು ಕೇಳಿಕೊಂಡೆವು. ಕೇಳಿದಾಕ್ಷಣ ಮರು ಮಾತಾಡದೇ ತುಂಬಾ ಪ್ರೀತಿಯಿಂದ ಟೈಟಲ್ ಕೊಟ್ಟರು. ಒಂದು ಬಿಡಿಗಾಸು ಪಡೆಯಲಿಲ್ಲ… ನಾವು ಅವರ ಪ್ರೀತಿಗೆ ಅಭಾರಿಯಾಗಿದ್ದೇವೆ. ಇದೆಲ್ಲಾ ಪ್ರಕ್ರಿಯೆ ಆದಮೇಲಷ್ಟೇ ಪತ್ರಿಕೆಗಳಲ್ಲಿ ಜಾಹೀರಾತು ಹಾಕಿದ್ದು. ನಮ್ಮ ಬಳಿ ಎಲ್ಲಾ ದಾಖಲೆಗಳಿವೆ. ಅಷ್ಟಕ್ಕೂ ನಿಯಮ ಬಾಹಿರವಾಗಿ ನಾವು ಯಾವುದೇ ಕೆಲಸ ಮಾಡಿಲ್ಲ. ಮಾಡೋದೂ ಇಲ್ಲ.’ ಎಂದು ಸ್ಪಷ್ಟಪಡಿಸಿದರು.

