ನಿಜವಾದ ಪ್ರೀತಿ ಪ್ರಾರಂಭವಾಗುವುದು ಒಂದೇ ಒಂದು ಸಾರಿ
published on Dec.17, 2011, under News
ನಿಜವಾದ ಪ್ರೀತಿ ಉಂಟಾಗುವುದು ಒಂದೇ ಸಾರಿ, ಅಂತಹ ಪ್ರೀತಿ ಎಂದೆಂದು ಶಾಶ್ವತ. ಅಂತಹ ಪ್ರೀತಿಯು ಒಮ್ಮೊಮ್ಮೆ ಅನುಮಾನ ಎಂಬ ರೋಗಕ್ಕೆ ಬಲಿಯಾಗಿ ಬಡವಾಗುವುದುಂಟು. ಪ್ರೀತಿಗೆ ಬೀಳದವರು ಯಾರಿಲ್ಲ ಹೇಳಿ, ಯುವಕ-ಯುವತಿಯರು, ಗಂಡ-ಹೆಂಡತಿಯರ ನಡುವಿನ ಜೀವನದ ಕೊಂಡಿಯೇ ಪ್ರೀತಿ. ಇಂತಹ ಪ್ರೀತಿಗೆ ಒಂದು ಮಿಸ್ ಕಾಲ್ ಇಲ್ಲವೇ ಮೆಸೆಜ್ ಸಂಸಾರವನ್ನೆ ಹಾಳು ಮಾಡಿಬಿಡುತ್ತದೆ. ಇವೆಲ್ಲ ಅಂಶಗಳನ್ನು ಒಳಗೊಂಡ ಸುಮುದುರ ಹಾಗೂ ರೋಮ್ಯಾಂಟಿಕ್ ಸಿನಿಮಾವೇ ‘ಒಂದೇ ಒಂದು ಸಾರಿ’.
ಶ್ರೀ ಮುತ್ತು ಪಿಲಂಸ್ ಬ್ಯಾನರಡಿಯಲ್ಲಿ ಪ್ರವೀಣ್ಕುಮಾರ್ ಕೊಂಚಾಡಿ ‘ಏಕಮೇವ’ ಸಿನಿಮಾ ನಿರ್ಮಿಸಿ ಅಂತರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿ ಪಡೆದವರು. ಇವರ ಬ್ಯಾನರಿನಲ್ಲಿ ‘ಒಂದೇ ಒಂದು ಸಾರಿ’ ಸಿನಿಮಾ ನಿರ್ಮಿಸಿ ರಾಜ್ಯದಾದ್ಯಂತ ಪ್ರೀತಿ ಮತ್ತು ಅನುಮಾನದ ಕಾನ್ಸೆಪ್ಟನ್ನು ತಮ್ಮದೇ ದಾಟಿಯಲ್ಲಿ ರಾಜ್ಯದ ಜನತೆಗೆ ತಿಳಿಸಲು ಹೊರಟಿದ್ದಾರೆ. ಹಿಂದೆ ‘ಕಡಲಮಗೆ’ ತುಳು ಚಿತ್ರ ನಿರ್ದೇಶಿಸಿದ ಪ್ರವೀಣ್ ತೊಕ್ಕಟ್ಟು ಒಂದೇ ಒಂದು ಸಾರಿ’ ಗೂ ಆಕ್ಷನ್-ಕಟ್ ಹೇಳಿದ್ದಾರೆ. ಬೆಂಗಳೂರು, ಮಂಗಳೂರು, ಕುಂದಾಪುರ ಗಳಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಮೂರು ನಾಯಕರು, ಒಬ್ಬಳು ನಾಯಕಿ. ಇಲ್ಲಿ ನಡೆಯುವುದು ಚತುರ್ಮುಖಿ ಪ್ರೀತಿಯಂತೆ. ಮೊದಲ ಹೀರೋ ರಮೇಶ್ ಈಗಾಗಲೇ ಕಣ್ವ, ದಿಲ್ದಾರ್ ಹಾಗೂ ದಂಡಂ ದಶಗುಣಂ ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಅಭಿನಯಿಸಿದ ಆಕಾಶ್ ಮತ್ತು ಇನ್ನೊಬ್ಬ ಹೊಸ ಪರಿಚಯ ಮಾಡಿಕೊಳ್ಳುತ್ತಿರುವ ಕಿಶೋರ್ ಶೆಟ್ಟಿ ಇನ್ನಿಬ್ಬರು ನಾಯಕ ನಟರು. ಇವರೊಂದಿಗೆ ಲವ್ ಗೇಮ್ನಲ್ಲಿ ಬರುವವಳು ‘ಪ್ಯಾಟೆ ಹುಡುಗಿಯರು ಹಳ್ಳಿಗೆ ಬಂದ್ರು’ ಸುವರ್ಣ ಟಿ.ವಿ.ಯ ರಿಯಾಲಿಟಿ ಶೋ ಖ್ಯಾತಿಯ ಶ್ವೆತಾ.
ಒಂದೇ ಒಂದು ಸಾರಿ ಸಿನಿಮಾದಲ್ಲಿ ಒಟ್ಟು 7 ಹಾಡುಗಳಿವೆ. ಎಲ್ಲಾ ಹಾಡುಗಳು ಕೇಳಲು ಇಂಪಾಗಿದ್ದು ಎಂ.ರಾಜೇಶ್ ಸಂಗೀತ ಸಂಯೋಜಿಸಿದ್ದಾರೆ. ಉದಿತ್ ನಾರಯಣ್,ಕುನಾಲ್ ಗಾಂಜವಾಲಾ, ಅನುರಾಧ ಭಟ್, ರಾಜೇಶ್ ಕೃಷ್ಣನ್ರವರ ಸಂಗೀತವಿದೆ. ಸಲೀಂ ಪುತ್ತೂರ್, ಶಶಿರಾಜ್ ಕಾವೂರ್ ಅವರ ಸಾಹಿತ್ಯವಿರುವ ಹಾಡುಗಳನ್ನು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಮಂಗಳೂರಿನ ಮೂಲದ ಟ್ರಾವೆಲ್ಸ್ ಬ್ಯುಸಿನೆಸ್ ಮಾಡುತ್ತಿರುವ ಪ್ರವೀಣ್ ತುಂಬ ಪ್ರಯಾಸ ಪಟ್ಟು ರಾಜ್ಯದಾದ್ಯಂತ ‘ಒಂದೇ ಒಂದು ಸಾರಿ’ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ. ಈ ಚಿತ್ರತಂಡದ ಪ್ರಯತ್ನ ಫಲ ನೀಡಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಬೇಕಾಗಿದೆ. ಅಲ್ಲದೇ ನಿರ್ಮಾಪಕರು ಪ್ರೇಕ್ಷಕರಿಗಾಗಿ ಲಕಿ ಕೂಪನ್ ಮೂಲಕ ಅದೃಷ್ಟವಂತರಿಗೆ ಬೆಲೆಬಾಳುವ ಬಹುಮಾನವನ್ನು ಘೋಷಣೆ ಮಾಡಿದ್ದಾರೆ.