ಪ್ರೇಕ್ಷಕರೆ ಮತ್ತೆ ಬನ್ನಿ ಚಿತ್ರಮಂದಿರಕ್ಕೆ
published on Dec.15, 2011, under News
ಎಷ್ಟೋ ಚಿತ್ರಗಳು ಪ್ರೇಕ್ಷಕರ ಮನ್ನಣೆಗೆ ಪಾತ್ರವಾಗಿದ್ದರೂ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿರುವುದಿಲ್ಲ. ಹಾಗೇ ಒಂದಷ್ಟು ಚಿತ್ರಗಳು ಸುಮಾರಾಗಿದ್ದರೂ, ಕಲೆಕ್ಷನ್ ಫುಲ್ ಆಗಿರುತ್ತದೆ. ಮೊದಲಿನ ಕೆಟಗರಿಗೆ ಸೇರಿದ ಸಿನಿಮಾವೊಂದು ಈ ವಾರ ಮರು ಬಿಡುಗಡೆಯಾಗುತ್ತಿದೆ. ಬರಿ ಚಿತ್ರತಂಡಕ್ಕೆ ಅಷ್ಟೇ ಅಲ್ಲದೇ ಚಿತ್ರ ನೋಡಿದ ಪ್ರತಿಯೊಬ್ಬರಿಂದಲೂ ಭೇಷ್ ಎನಿಸಿಕೊಂಡಿತ್ತು. ಮೊದಲಿದ್ದ ಶೀರ್ಷಿಕೆ ಸಮೇತ ಚಿತ್ರದಲ್ಲೂ ಒಂದಷ್ಟು ಬದಲಾವಣೆ ಮಾಡಿಕೊಂಡಿದೆ ಚಿತ್ರತಂಡ. ಅದೇ ಮತ್ತೆ ಬನ್ನಿ ಪ್ರೀತ್ಸೋಣ. ಮೊದಲು ಆ್ಯಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ ಎಂದಿತ್ತು. ಆ್ಯಮ್ ಸಾರಿಯನ್ನು ಬದಿಗಿಟ್ಟು ಜಸ್ಟ್ ಪ್ರೀತ್ಸೋಕೆ ಆಹ್ವಾನಿಸಿದೆ ಚಿತ್ರತಂಡ. ಅಷ್ಟಕ್ಕೂ ಇದನ್ನು ಮರುಬಿಡುಗಡೆ ಮಾಡುತ್ತಿರೋದು ನಿರ್ಮಾಪಕರಲ್ಲ! ಚಿತ್ರ ನೋಡಿದ ಸಾಮಾನ್ಯ ಪ್ರೇಕ್ಷಕರು. ನಾನಾಗೌಡ ಹಾಗೂ ಲೀಲಾ ಶಂಕರ್ ಪತ್ರಿಕೆಗಳಲ್ಲಿ ಬಂದ ವಿಮರ್ಶೆಗಳನ್ನು ನೋಡಿ ನಂತರ ಚಿತ್ರ ವೀಕ್ಷಿಸಿದ್ದಾರೆ. ಆದರೆ ಚಿತ್ರ ಒಂದೇ ವಾರಕ್ಕೆ ಎತ್ತಂಗಡಿಯಾದ ಕಾರಣ ಬೇಸರಗೊಂಡು ಇದೀಗ ತಾವೇ ಸಿನಿಮಾ ಬಿಡುಗಡೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅವರೊಂದಿಗೆ ವಿತರಕ ಎನ್.ಕುಮಾರ್ ಸಹ ಕೈ ಜೋಡಿಸಿದ್ದಾರೆ. ಹೀಗಾಗಿ `ಪ್ರೇಕ್ಷಕರಿಂದ ಪ್ರೇಕ್ಷಕರಿಗೋಸ್ಕರ’ ಎಂದು ಮತ್ತೊಮ್ಮೆ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಪ್ರೇಮ್ ಹಾಗೂ ಕರಿಷ್ಮಾ ತನ್ನಾ ಅಭಿನಯ ಕಂಡು ರೆಬೆಲ್ ಸ್ಟಾರ್ ಅಂಬರೀಷ್ ಕೂಡ ಇವರೆಲ್ಲರಿಗೂ ಸಾಥ್ ನೀಡಿದ್ದಾರೆ. ಮರುಬಿಡುಗಡೆಗೆ ಅವರೇ ಪ್ರಚಾರ ನಡೆಸಿ, ಚಿತ್ರತಂಡಕ್ಕೆ ಬೆಂಬಲ ನೀಡಿದ್ದಾರೆ. ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ ಅಷ್ಟು ಚೆನ್ನಾಗಿದೆ ಎಂಬುದು ಅಂಬಿ ಅಭಿಪ್ರಾಯ. ಅದರಲ್ಲಿ ಎರಡು ಮಾತಿಲ್ಲ. ಚಿತ್ರ ನಿಜಕ್ಕೂ ಚೆನ್ನಾಗಿದೆ.
ಕನ್ನಡದ ಮಟ್ಟಿಗೆ ಇದೊಂಥರ ಹೊಸಬಗೆಯ ಪ್ರೇಮಕಾವ್ಯ.ಅದ್ಧೂರಿ ತಾಣಗಳನ್ನು ಹುಡುಕಿಕೊಂಡು ಯಾವುದೇ ಹೊರದೇಶಗಳಿಗೆ ಹೋಗದೆ, ಇಲ್ಲಿರುವ ಸುಂದರ ಜಾಗಗಳನ್ನೇ ನೀಟಾಗಿ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ ಛಾಯಾಗ್ರಾಹಕ ಅಶೋಕ್ ಕಶ್ಯಪ್. ಕಥೆಯ ಜೊತೆಯಲ್ಲೇ ಬೆರೆತಿರುವ ಹಾಡುಗಳೂ ಸಹ ಚಿತ್ರದ ಪ್ಲಸ್ ಪಾಯಿಂಟ್. ಚಿತ್ರದಲ್ಲಿ ಇರುವ ಅಷ್ಟೂ ಹಾಡುಗಳಿಗೆ ಸಂಗೀತ ನೀಡಿದ್ದಾರೆ ಅನೂಪ್ ಸೀಳಿನ್. ಹಿನ್ನೆಲೆ ಸಂಗೀತ ಸಹ ಚಿತ್ರಕ್ಕೆ ಸಾಥ್ ನೀಡುವಲ್ಲಿ ಯಶಸ್ವಿಯಾಗಿದೆ. ಇವೆಲ್ಲದರ ಜೊತೆ ರವೀಂದ್ರ ಬರೆದಿರುವ ಕಥೆ, ಚಿತ್ರಕಥೆ ಹಾಗೂ ಗುರುಪ್ರಸಾದ್, ತಬಲ ನಾಣಿ ಬರೆದಿರುವ ಸಂಭಾಷಣೆ ಚಿತ್ರ ನೋಡುವಂತೆ ಮಾಡುತ್ತದೆ. ನ್ನೂ ಅಭಿನಯದ ವಿಚಾರದಲ್ಲಿ ಯಾರೂ ಹಿಂದೆ ಬಿದ್ದಿಲ್ಲ. ಪ್ರೇಮ್, ತಬಲಾ ನಾಣಿ, ಕರಿಷ್ಮಾ ತನ್ನಾ, ಸಂಜನಾ ಸೇರಿದಂತೆ ಫ್ರೇಮ್ನಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಬ್ಬರೂ ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ಇದರ ಜೊತೆಗೆ ಮೊದಲಿದ್ದ ಕಥೆಯನ್ನು ಒಂದಷ್ಟು ಟ್ರಿಮ್ ಮಾಡಿಕೊಂಡು ಫ್ರೆಶ್ಆಗಿ ನಿಂತಿದೆ ಚಿತ್ರತಂಡ. ತಬಲ ನಾಣಿ ಮೊದಲು ಡಬ್ ಮಾಡಿದಾಗ ಅನಾರೋಗ್ಯದ ಸಮಸ್ಯೆ ಇತ್ತಂತೆ. ಹೀಗಾಗಿ ಮತ್ತೊಮ್ಮೆ ಅವರ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಚಿತ್ರದಲ್ಲಿ ಬೆಚ್ಚನೆಯ ಪ್ರೀತಿಯಿದೆ. ತುಂತುರು ಹನಿಯ ಮುತ್ತಂತೆ ಕಾಣುವ ಈ ಚಿತ್ರವನ್ನು ನೀವೊಮ್ಮೆ ಕಣ್ತುಂಬಿಕೊಳ್ಳಿ.ಹಾಗೆ ಚಿತ್ರ ಸದ್ಯದಲ್ಲೇ ಹಿಂದಿ, ತಮಿಳು, ತೆಲುಗಿನಲ್ಲಿ ರೀಮೇಕ್ ಆಗುತ್ತಿದೆ. ಮಲಯಾಳಂನಲ್ಲಿ ಡಬ್ಬಿಂಗ್ ಆಗುತ್ತಿದೆ. ಇಷ್ಟೆಲ್ಲಾ ವಿಶೇಷತೆಯಿರುವ ಚಿತ್ರವನ್ನು ಇಲ್ಲೂ ಒಮ್ಮೆ ನೋಡಲಿ ಎಂದು ಮರುಬಿಡುಗಡೆಯಾಗುತ್ತಿದೆ. ಎಷ್ಟೋ ಚಿತ್ರಗಳು ಮರು ಬಿಡುಗಡೆಯಾದ ಮೇಲೆ ಹಿಟ್ ಆಗಿರುವ ನಿದರ್ಶನಗಳಿವೆ. ಈ ಚಿತ್ರಕ್ಕೂ ಅದೇ ಭಾಗ್ಯ ಸಿಗಲಿ…