ಮೂರುವರೆ ದಶಕ ಪೂರೈಸುತ್ತಿರುವ ಪುನೀತ್
published on Mar.26, 2010, under Special Feature
ಮೊನ್ನೆ ತಾನೆ ೩೫ ರ ಹರೆಯಕ್ಕೆ ಕಾಲಿಟ್ಟ ಪುನೀತ್ ಕನ್ನಡ ಚಿತ್ರರಂಗದಲ್ಲಿ ಮೂರುವರೆ ದಶಕ ಪೂರೈಸುವತ್ತ ಮುಖ ಮಾಡಿದ ಮೇರು ನಟ. ಇಂದು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪುನೀತ್ ಅವರಿಗೊಂದು ವಿಶೇಷ ಸ್ಥಾನವಿದೆ. ಸರಳತೆ, ನೈಜತೆ, ಚಾತುರ್ಯ ಗಳನ್ನು ಮೈಗೂಡಿಸಿಕೊಂಡು ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ಪುನೀತ್ ಎಲ್ಲ ಕನ್ನಡಿಗರ ಹೃದಯದಲ್ಲಿ .ಮನೆಮಾಡಿದ್ದಾರೆ. ಅವರ ಚಿತ್ರ ಬಂದಿದೆ ಎಂದರೆ ಅಭಿಮಾನಿಗಳು ಒಂದು ಬಾರಿಯಾದರೂ ಚಿತ್ರ ನೋಡಲೇಬೇಕೆಂದು ಥೇಟರಿಗೆ ಓಡಿಯೇ ಬಿಡುತ್ತಾರೆ.
ಪರ ಭಾಷಾ ಸಿನಿಮಾಗಳ ಸ್ಪಧೆ೯ಯ ನಡುವೆಯೂ ಪುನೀತ್ ತಮ್ಮ ಮಾತು ಹಾಗೂ ನಟನೆಯಲ್ಲಿ ತಮ್ಮತನವನ್ನು ಉಳಿಸಿಕೊಂಡಿರುವ ಇವರು ಕನ್ನಡ ಚಿತ್ರರಂಗದಲ್ಲಿ ಎಂದೆದಿಗೂ ಎವರ್ ಗ್ರೀನ್. ಮಾಸ್ ಅಂಡ್ ಕ್ಲಾಸ್ ಎರಡನ್ನೂ ಏಕಕಾಲದಲ್ಲಿ ಮುಟ್ಟಿದ ನಟನೆಂಬ ಕೀತಿ೯ ಇವರಿಗಿದೆ. ಪುನೀತ್ ಗೆ ತನ್ನದೇ ಆದ ಒಂದು ಸ್ಟೈಲ್ ಇದೆ ಅದರಿಂದಲೇ ಅವರು ಪ್ರೇಕ್ಷಕರನ್ನು ಸೆಳೆಯುತ್ತಾರೆ.
ಪುನೀತ್ ಕಥೆಗಳನ್ನು ಆಯ್ದುಕೊಳ್ಳುವಾಗ ಬಹಳಷ್ಟು ಎಚ್ಚರವಹಿಸಿ ಒಪ್ಪಿಕೊಳ್ಳುತ್ತಾರೆ. ವರ್ಷಕ್ಕೆ ಸಾಕಷ್ಟು ಕಥೆಗಳನ್ನು ಅವರು ನಿರಾಕರಿಸುತ್ತಾರೆ. ಉತ್ತಮ ಕಥೆ ಆಯ್ದುಕೊಂಡು ಕೇವಲ ಕೆಲವೇ ಸಿನಿಮಾಗಳಿಗೆ ಒಪ್ಪಿಕೊಳ್ಳುವ ಅವರ ಜಾಣತನವೇ ಅವರನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ ಎಂದರೆ ತಪ್ಪಾಗಲಾರದು.
ಅಪ್ಪು ೫ ತಿಂಗಳ ಮಗುವಾಗಿರುವಾಗಲೇ ಚಿತ್ರರಂಗಕ್ಕೆ ಕಾಲಿಟ್ಟರು. ಚಿಕ್ಕಂದಿನಲ್ಲಿ ತನ್ನ ಅಮೋಘ ಅಭಿನಯದಿಂದ ಪ್ರೇಕ್ಷಕರ ಮನಗೆದ್ದು ಇಂದು ಕನ್ನಡ ಚಿತ್ರರಂಗದಲ್ಲಿಯೇ ಎಲ್ಲರಿಗಿಂತ ಹೆಚ್ಚು ಸಂಭಾವನೆ ತೆಗೆದುಕೊಳ್ಳುವ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಸಂಭಾವನೆ ತೆಗೆದುಕೊಳ್ಳುವ ನಟರು ತುಂಬಾ ಕಡಿಮೆ. ಪುನೀತ್ ಅವರ ಸಂಭಾವನೆ ೧.೫ ರಿಂದ ೨ ಕೋಟಿಯವರೆಗೆ ಇದೆ.
ಚಿತ್ರರಂಗಕ್ಕೆ ನಟನಾಗಿ ಕಾಲಿಡುವುದಕ್ಕಿಂತ ಮುಂಚೆ ಪುನೀತ್ ಅವರದೆ ವಜ್ರೇಶ್ವರಿ ಕಂಬೈನ್ಸ್ ಹೋಮ್ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಣ್ಣ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರ ಚಿತ್ರಕ್ಕೆ ನಿರ್ಮಾಣದ ಕೆಲಸ ಕೂಡ ಮಾಡಿದ್ದಾರೆ. "ಆಕಸ್ಮಿಕ" ಚಿತ್ರದಲ್ಲಿ ತಮ್ಮ ತಂದೆಯ ಉಡುಗೆಯ ವಿನ್ಯಾಸದ ಕೆಲಸದಲ್ಲಿಯೂ ಕೂಡ ಭಾಗಿಯಾಗಿದ್ದಾರೆ.
ಅಪ್ಪು ಅವರ ಮೊದಲ ಚಿತ್ರ "ಪ್ರೇಮದ ಕಾಣಿಕೆ" (೧೯೭೬). ಇಲ್ಲಿಂದಲೇ ಅವರ ಚಿತ್ರದ ನಂಟು ಶುರುವಾಯಿತು. ಸುಮಾರು ೧೨ ಚಿತ್ರಗಳಲ್ಲಿ ಬಾಲ ನಟನಾಗಿ ಕಾಣಿಸಿಕೊಂಡಿದ್ದಾರೆ.
| ಚಿತ್ರ | ಇಸ್ಚಿ | ಪಾತ್ರದ ಹೆಸರು |
| "ಪ್ರೇಮದ ಕಾಣಿಕೆ" | ೧೯೭೬ | ಮಗುವಾಗಿ |
| "ಸನಾದಿ ಅಪ್ಪಣ್ಣ" | ೧೯೭೭ | ಮಗುವಾಗಿ |
| "ವಸಂತ ಗೀತ" | ೧೯೮೦ | ಶ್ಯಾಮ್ |
| ಭಾಗ್ಯವಂತ" | ೧೯೮೧ | ಕೃಷ್ಣ |
| "ಹೊಸಬೆಳಕು" | ೧೯೮೧ | ಪುಟ್ಟು |
| "ಚೆಲಿಸುವ ಮೋಡಗಳು" | ೧೯೮೨ | ರಾಮು |
| "ಭಕ್ತ ಪ್ರಹ್ಲಾದ" | ೧೯೮೨ | ಪ್ರಹ್ಲಾದ |
| "ಎರಡು ನಕ್ಷತ್ರಗಳು" | ೧೯೮೩ | ರಾಜಾ |
| "ಯಾರಿವನು" | ೧೯೮೪ | ಶ್ಯಾಮ್ |
| "ಬೆಟ್ಟದ ಹೂವು" | ೧೯೮೫ | ರಾಮು ಈ ಚಿತ್ರಕ್ಕೆ ೧೯೮೬ ರಲ್ಲಿ ಉತ್ತಮ ಬಾಲನಟ ಎಂಬ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ. |
| "ಪರಶುರಾಮ" | ೧೯೮೯ |
ಮೊದಲ ಚಿತ್ರ "ಅಪ್ಪು" ವಿನಿಂದ ಅವರು ಹೀರೋ ಆಗಿ ೨೦೦೨ ರಲ್ಲಿ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟರು. "ಅಪ್ಪು" ತೆರೆಕಂಡ ಮೇಲೆ ೨೦೦ ದಿನ ಓಡಿತು. ಪುನೀತ್ ಅವರ ಯಾವುದೇ ಚಿತ್ರವೂ ಕೂಡ ೧೦೦ ದಿನ ಇಲ್ಲದೇ ಓಡುವುದಿಲ್ಲ ಎನ್ನುವುದು ಅವರ ನಿರ್ಮಾಪಕ, ನಿರ್ದೇಶಕ ಹಾಗೂ ಎಲ್ಲ ಅಭಿಮಾನಿಗಳಿಗೆ ಗೊತ್ತು. ಅದಕ್ಕೇ ನಿರ್ಮಾಪಕರು ಪುನೀತ್ ರ ಕಾಲ್ ಶೀಟ್ ಗೆ ಕಾಯುತ್ತಿರುತ್ತಾರೆ.
"ಆಕಾಶ್" ಚಿತ್ರ ೨೦೦ ದಿನ ಓಡಿದರೆ "ಮಿಲನ" ಒಟ್ಟು ೪೫೦ ದಿನ ಓಡಿ ಅವರಿಗೆ ಯಶಸ್ಸು ತಂದುಕೊಡುವುದಲ್ಲದೇ ಉತ್ತಮ ನಟನೆಗಾಗಿ ೨೦೦೭ ರಲ್ಲಿ ರಾಜ್ಯ ಪ್ರಶಸ್ತಿ ತಂದು ಕೊಟ್ಟಿದೆ. ೨೦೦೭ ರಲ್ಲಿ "ಅರಸು" ಚಿತ್ರ ಪುನೀತ್ ಅವರಿಗೆ ಉತ್ತಮ ನಟ ಎಂಬ ಫಿಲ್ಮ್ ಫೇರ್ ಪ್ರಶಸ್ತಿ ತಂದು ಕೊಟ್ಟಿದೆ ಇವಲ್ಲದೆ ಎನ್ ಜಿ ಓ ಸಂಸ್ಥೆಯು ಪುನೀತ್ ಅವರನ್ನು ಕರ್ನಾಟಕದ ಸುಪ್ರಸಿದ್ಧ ಮಗ ಎಂಬ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕನ್ನಡ ಚಿತ್ರರಂಗದಲ್ಲಿ ಸತತ ೯ ಹಿಟ್ ಚಿತ್ರಗಳನ್ನು ಕೊಟ್ಟ ಏಕೈಕ ನಟ ಪುನೀತ್. ಇದುವರೆಗೆ ಹೀರೋ ಆಗಿ ಒಟ್ಟು ೧೨ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಚಿತ್ರಗಳು ಇಂತಿವೆ.
| ಚಿತ್ರ | ಇಸ್ವಿ | ನಾಯಕನ ಹೆಸರು | ದಿನಗಳು |
| "ಅಪ್ಪು" | ೨೦೦೨ | ಅಪ್ಪು | ೨೦೦ |
| "ಅಭಿ" | ೨೦೦೩ | ಅಭಿ | ೧೨೫ |
| "ವೀರ ಕನ್ನಡಿಗ" | ೨೦೦೩ | ಮುನ್ನಾ | ೧೧೫ |
| "ಮೌರ್ಯ" | ೨೦೦೪ | ಮನು | ೧೨೫ |
| "ಆಕಾಶ್" | ೨೦೦೪ | ಆಕಾಶ್ | ೨೦೦ |
| "ನಮ್ಮ ಬಸವ" | ೨೦೦೫ | ಬಸವ | ೧೨೫ |
| "ಅಜಯ" | ೨೦೦೬ | ಅಜಯ | ೧೦೦ |
| "ಅರಸು" | ೨೦೦೬ | ಶಿವರಾಜ್ ಅರಸ | ೧೨೫ |
| "ಮಿಲನ" | ೨೦೦೭ | ಆಕಾಶ್ | ೪೫೦ |
| "ಬಿಂದಾಸ್" | ೨೦೦೭ | ಶಿವು | ೧೦೦ |
| "ವಂಶಿ" | ೨೦೦೮ | ವಂಶಿ | ೧೨೫ |
| "ರಾಜ್" | ೨೦೦೮ | ಮುತ್ತುರಾಜ್ | ೧೦೦ |
| "ರಾಮ್" | ೨೦೦೯ | ರಾಮ್ | ೮೦ ದಿನಗಳು |
ಮುಂಬರುವ ಚಿತ್ರಗಳು:
| ಚಿತ್ರ | ಇಸ್ವಿ |
| "ಪೃಥ್ವಿ" | ಈ ಚಿತ್ರ ಎಪ್ರೀಲ್ ೨೩ ೨೦೧೦ ರಂದು ಬಿಡುಗಡೆಯಾಗುತ್ತಿದೆ. |
| "ಜಾಕಿ" | ಸೂರಿ ಅವರ ನಿರ್ದೇಶನದಲ್ಲಿ ತಯಾರಾಗುತ್ತಿದೆ. ೨೦೧೦ ರಂದು ಬಿಡುಗಡೆಯಾಗುತ್ತಿದೆ. |
ಪುನೀತ್ ಕೇವಲ ನಟನೆಯಲ್ಲಿ ಮಾತ್ರವಲ್ಲ, ಹಾಡು ಕೂಡಾ ಸೊಗಸಾಗಿ ಹಾಡುತ್ತಾರೆ. ಅವರ ಅನೇಕ ಚಿತ್ರಗಳಲ್ಲಿ ಹಾಡಿದ್ದಾರೆ. ಅವರು ಹಾಡಿರುವ ಕೆಲವು ಚಿತ್ರಗಳು ಮತ್ತು ಹಾಡುಗಳು. ಬಾನಾ ದಾರಿಯಲ್ಲಿ ಸೂರ್ಯ ಜಾರಿ ಹೋದ ಎಂಬ ಗೀತೆಯನ್ನು "ಭಾಗ್ಯವಂತ" ಚಿತ್ರದಲ್ಲಿ ಹಾಡಿದ್ದಾರೆ. ಕಾಣದಂತೆ ಮಾಯವಾದನೋ ನಮ್ಮ ಶಿವ ಕೈಲಾಸ ಸೇರಿಬಿಟ್ಟನೊ ಹಾಡನ್ನು "ಚೆಲಿಸುವ ಮೋಡಗಳು" ಚಿತ್ರದಲ್ಲಿ ಹಾಡಿದರೆ, "ಭಕ್ತ ಪ್ರಹ್ಲಾದದಲ್ಲಿ" ನಾರಾಯಣಾ ಹರಿ ನಾರಾಯಣಾ ಎಂಬ ಭಕ್ತಿ ಗೀತೆಯನ್ನ ಸಾರಿದರು.
"ಬೆಟ್ಟದ ಹೂ"ವಿ ನಲ್ಲಿ ಬಿಸಿಲೆ ಇರಲಿ ಮಳೆಯೇ ಬರಲಿ ಕಾಡಲ್ಲಿ ಮೇಡಲ್ಲಿ ಅಲೆವೆ ಎಂದು ಕಾಡಲ್ಲಿ ಅಲೆಯಲು ರೆಡಿಯಾದರು. "ಪರಶುರಾಮ್"ನಲ್ಲಿ ಕಾದ್ರೆ ತಪ್ಪು, ಕೊಂದ್ರೆ ತಪ್ಪು ಎಂದು ತಿಳಿಸಿದರು. "ಅಪ್ಪು"ವಿನ ಅವತಾರದಲ್ಲಿ ತಾಲಿಬಾನ್ ಅಲ್ಲಾ ಅಲ್ಲಾ ಬಿನ್ ಲ್ಯಾಡೆನ್ ಅಲ್ಲ್ವೇ ಅಲ್ಲಾ ಎಂದು ಹಾಡಿ ಚಿತ್ರರಸಿಕರನ್ನು ಹುರಿದುಂಬಿಸಿದರು.
ಮಾಮಾ ಮಾಮಾ ಮಜಾ ಮಾಡೆಂದು ಹಾಡಿದರು "ಅಭಿ"ಯಲ್ಲಿ. "ವೀರ ಕನ್ನಡಿಗ"ದಲ್ಲಿ ನೈರೆ ನೈರೆ ನೈನೈರೆ ಬಾಬಾ ಎಂದರು. "ಮೌರ್ಯ"ದಲ್ಲಿ ಸಿಂಪಲ್ ಆಗಿ ಹೇಳ್ತಿನ್ ಕೇಳೆ ಎಂದರು. ಆಕಾಶ"ನಾಗಿ ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ ಎಂದು ಡೋಲು ಹೊಡೆದರು. ಕೋಲೆ ಬಸವನಾಗದೆ "ನಮ್ಮ ಬಸವ"ನಾಗಿ ರುಕ್ಕು ರುಕ್ಕು ರುಕ್ಕಮ್ಮಾ ಸಿಟ್ಟ್ಯಾಕೆ ನನ್ನ ಮೇಲೆ ಎಂದರು ರುಕ್ಕುಗೆ.
ಹಾಟ್ ಪ್ಪಾ ಹಾಟು ಸಕತ್ತು ಹಾಟೆಂದರು "ಲವಕುಶ"ದಲ್ಲಿ. ಬೆಂಗಳೂರು ಮಂಗಳೂರು ಎಲ್ಲೇ ಹೋದ್ರು ಬಿಂದಾಸ್ ಎಂದರು "ಬಿಂದಾಸ್" ಆಗಿ. ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ ಎಂದು ಜೊತೆಯಾದರು "ವಂಶಿ"ಯಲ್ಲಿ. "ರಾಮ್" ನಲ್ಲಿ ಹೊಸ ಗಾನಬಜಾನ ಗುನುಗಿದರು. "ಪೃಥ್ವಿ" "ಜಾಕಿ" ಯಲ್ಲಿ ಹಾಡ್ತಾರಾ ಕಾದು ನೋಡಬೇಕು.
ಪುನೀತ್ ಕೇವಲ ನಟನೆಯಲ್ಲಿ ಅಷ್ಟೆ ತಮ್ಮನ್ನು ತೊಡಗಿಸಿಕೊಳ್ಳದೆ ಅನೇಕ ಜಾಹಿರಾತುಗಳಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಜಿ.ಕನ್ನಡದಲ್ಲಿ ಪ್ರಸಾರವಾಗುವ ಬಟ್ಟೆಯ ಹಾಗೂ ಅಂಬಾಸ್ಯಾಡರ್ ಬ್ರ್ಯಾಂಡ್ ನವರು ನಡೆಸಿಕೊಡುವ "ಧೀ" ಎಂಬ ಡ್ಯಾನ್ಸ್ ರಿಯಾಲಿಟಿ ಶೋಗೆ ಪುನೀತ್ ಜಡ್ಜ್. "ಮಲಬಾರ್" ಆಭರಣಗಳಿಗೆ, "ನಂದಿನಿ" ಎಂದು ಕರೆಯುವ ಕರ್ನಾಟಕ ಮಿಲ್ಕ್ ಫೆಡ್ರೆಷನ್ ಗೆ ಕೂಡ ಇವರು ಕಾರ್ಯಕರ್ತರು.
ಪುನೀತ್ ಹುಟ್ಟಿದ್ದು ೧೯೭೫ ಮಾರ್ಚ್ ೧೭ರಂದು. ಡಾ. ರಾಜ್ ಕುಮಾರ್ ಅವರಿಗೆ ಇವರು ೫ನೇಯ ಮಗ. ಚಿಕ್ಕಂದಿನಿಂದಲೇ ಚಿತ್ರರಂಗದ ನಂಟು ಇವರಿಗೆ ಅಂಟಿಕೊಂಡಿದ್ದರಿಂದಲೋ ಏನೋ ಹೆಚ್ಚು ಶಿಕ್ಷಣ ಮಾಡುವ ಸಾಹಸ ಮಾಡಲಿಲ್ಲ. ಪುನೀತ್ ರಿಗೆ ೨೪ ವಯಸ್ಸಿನಲ್ಲಿಯೇ ಮದುವೆಯಾಯಿತು. ಪತ್ನಿ ಅಶ್ವಿನಿ ರೇವನಾಥ್. ಇವರಿಗೆ ಇಬ್ಬರು ಮಕ್ಕಳು ಧೃತಿ ಮತ್ತು ವಂದಿತಾ.
"ರಾಮ್", "ಪೃಥ್ವಿ"ಯ ನಂತರ ಈಗ "ಜಾಕಿ" ಚಿತ್ರದಲ್ಲಿ ಬಿಜಿಯಾಗಿದ್ದಾರೆ ಪುನೀತ್. "ಪೃಥ್ವಿ" ಚಿತ್ರ ಇದೇ ಎಪ್ರೀಲ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. "ಜಾಕಿ" ಚಿತ್ರವನ್ನು ದುನಿಯಾ ಖ್ಯಾತಿಯ ಸೂರಿ ಅವರು ನಿರ್ದೇಶಿಸುತ್ತಿದ್ದಾರೆ.


i love puneet