ಹೊರದೇಶಕ್ಕೆ ‘ಮಳೆಯಲಿ ಜೊತೆಯಲಿ’ ಹೊರಡಲು ಸಿದ್ಧತೆ
published on Jan.20, 2010, under Uncategorized
ರಾಜ್ಯದಲ್ಲಿ ‘ಮಳೆಯಲಿ ಜೊತೆಯಲಿ’ ಚಿತ್ರ ಇಪ್ಪತ್ತೈದು ದಿನ ಪೂರೈಸಿ, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ‘ಬಿವಿನ್’ ಎಕ್ಸಪೋರ್ಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ಮೊದಲ ಹಂತದಲ್ಲಿ ಈ ಚಿತ್ರವನ್ನು ಅಮೆರಿಕಾ, ನ್ಯೂಜಿಲೆಂಡ್, ಸಿಂಗಾಪೂರ್, ಜರ್ಮನಿ, ಆಸ್ಟ್ರೇಲಿಯಾ ದಂತಹ ದೇಶಗಳಲ್ಲಿ ಬಿಡುಗಡೆ ಮಾಡುವ ಮೂಲಕ ಕನ್ನಡ ಚಿತ್ರೋದ್ಯಮದ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ.
ಈ ಮೊದಲು ‘ಬಿವಿನ್’ ಕಂಪೆನಿಯು ಕನ್ನಡದ ಅನೇಕ ಚಿತ್ರಗಳನ್ನು ಜರ್ಮನಿಯ ಲೆವೆರ್ಕುಸೇನ್ ಮತ್ತು ಹ್ಯಾಂಬರ್ಗ್, ಆಸ್ಟ್ರೇಲಿಯಾದ ಆಡಿಲೇಡ್ ಮತ್ತು ಪರ್ತ್ ಕೇಂದ್ರಗಳಿಗೆ ಬಿಡುಗಡೆ ಮಾಡಿತ್ತು. ಅಲ್ಲಿ ಕನ್ನಡ ಭಾಷಾ ಸಿನಿಮಾಗಳಿಗೆ ಪ್ರೀತಿ ಮತ್ತು ಗೌರವ ಸಿಕ್ಕಿತ್ತು. ಅಲ್ಲದೇ "ಮುಂಗಾರು ಮಳೆ" ಸಿನಿಮಾವೊಂದೆ ಹೊರದೇಶಗಳಿಂದ 40 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸಿತು. ಆ ದಿಸೆಯಲ್ಲಿ "ಮಳೆಯಲಿ ಜೊತೆಯಲಿ" ಸಿನಿಮಾವು ಉತ್ತಮ ಆರಂಭ ಕಾಣಲಿದೆ’ ಎಂದು ‘ಬಿವಿನ್’ ಕಂಪೆನಿಯ ಮುಖ್ಯಸ್ಥ ಜೋಯಲ್ ಸುಮಂತ್ ರಾಜ್ ಹೇಳಿದರು.
"ಈ ಸಿನಿಮಾದ ಪ್ರಚಾರಕ್ಕೆಂದೆ ಚಿತ್ರದ ಎಲ್ಲ ಮಾಹಿತಿ ಒಳಗೊಂಡ ವೆಬ್ಸೈಟ್ ತೆರೆದಿದೆ. ಇಲ್ಲಿ ವಿದೇಶಿ ಪ್ರೇಕ್ಷಕರು ಸಿನಿಮಾದ ಹಾಡು, ವಾಲ್ಪೇಪರ್ ಡೌನ್ ಲೋಡ್ ಮಾಡಿಕೊಳ್ಳುವುದಲ್ಲದೇ, ಇಂಟರ್ನ್ಯಾಷನಲ್ ರಿಲೀಸ್ ದಿನಾಂಕ ಇದರಲ್ಲಿ ನೋಡಬಹುದು. ಅಷ್ಟೇ ಅಲ್ಲದೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ 9900099000 ಎಂಬ ಮೊಬೈಲ್ ಸಂಖೆಗೆ ಜಗತ್ತಿನಾದ್ಯಂತ ಎಲ್ಲ ಪ್ರೇಕ್ಷಕರೂ ‘ಮಳೆಯಲಿ ಜೊತೆಯಲಿ’ ಸಿನಿಮಾ ಕುರಿತ ತಮ್ಮ ಅಭಿಪ್ರಾಯಗಳನ್ನು ಮೆಸೇಜ್ ಮೂಲಕ ತಿಳಿಸಬಹುದು.
ಇಲ್ಲಿಯವರೆಗೆ ಒಟ್ಟು ಹದಿನಾರು ಕನ್ನಡ ಸಿನಿಮಾಗಳು ಹೊರ ದೇಶಗಳಲ್ಲಿ ಬಿಡುಗಡೆಗೊಂಡಿದ್ದು, ಎಲ್ಲವು ಉತ್ತಮ ಯಶಸ್ಸು ಕಂಡಿವೆ. ಕೆಲ ಹಿಟ್ ಸಿನಿಮಾಗಳಾದ ‘ಆಕಾಶ್, ಅಜಯ್, ರಾಮಾ ಶಾಮಾ ಭಾಮಾ, ಸತ್ಯವಾನ್ ಸಾವಿತ್ರಿ, ಮುಂಗಾರು ಮಳೆ, ಅರಮನೆ, ರಾಜ್ ಇಂತಹ ಇನ್ನೂ ಅನೇಕ ಚಿತ್ರಗಳು ಉತ್ತಮ ರೀತಿಯಲ್ಲಿ ನಡೆದು ಸೈ ಎನಿಸಿಕೊಂಡಿವೆ.

